ಕರ್ನಾಟಕ ವಿಶ್ವವಿದ್ಯಾಲಯ


ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಬಾಂಬೆ ಶಾಸಕಾಂಗವು ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ ೧೯೪೯ ರ ಮೂಲಕ ಕರ್ನಾಟಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತು. ಇದು ಮಾರ್ಚ ೧, ೧೯೫೦ ರಂದು ಶಾಸನಬದ್ಧ ವಿಶ್ವವಿದ್ಯಾಲಯವಾಯಿತು. ವಿಶ್ವವಿದ್ಯಾಲಯದ ಆಡಳಿತ ವ್ಯಾಪ್ತಿಯು ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ. ಇದು ಹಲವು ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದೆ. ವಿಶ್ವವಿದ್ಯಾಲಯವು ೮೮೮ ಎಕರೆಗಳಷ್ಟು ಭೂವ್ಯಾಪ್ತಿಯನ್ನು ಹೊಂದಿದ್ದು, ಕಲೆ, ವಾಣಿಜ್ಯ, ಶಿಕ್ಷಣ, ಕಾನೂನು, ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಮಾಜವಿಜ್ಞಾನ ನಿಕಾಯಗಳಲ್ಲಿ ಕೋರ್ಸಗಳನ್ನು ನೀಡುತ್ತಿದೆ. ವಿಶ್ವವಿದ್ಯಾಲಯದ ‘ಕಾಣ್ಕೆ’ ಮತ್ತು ‘ಉದ್ದಿಷ್ಟಧ್ಯೇಯ’ದ ಸಂಕೇತವಾಗಿ ವಿಶ್ವವಿದ್ಯಾಲಯದ ಲಾಂಛನವು ಮಧ್ಯದಲ್ಲಿ ಆಲದಮರ, ತೆರೆದಪುಸ್ತಕ, ಬಸವ, ಆನೆ, ಉದಯಿಸುತ್ತಿರುವ ಸೂರ್ಯ ಚಿತ್ರಗಳು ಲೋಕಜ್ಞಾನವನ್ನು ಅನಾವರಣಗೊಳಿಸುವ ‘ಅರಿವೇ ಗುರು’ ಘೋಷವಾಕ್ಯದ ಮೂಲಕ ಬಿಂಬಿತವಾಗಿದ್ದು, ಜ್ಞಾನ, ವಿವೇಕ ಮತ್ತು ಬುದ್ದಿವಂತಿಕೆಗಳು ಆಲದಮರದಂತೆ ಎಲ್ಲೆಡೆ ವ್ಯಾಪಿಸಿ ಜಗತ್ತನ್ನು ಬೆಳೆಗುವುದರೊಂದಿಗೆ ಅನಕ್ಷರತೆಯನ್ನು ನಿರ್ಮೂಲನೆ ಮಾಡಬೇಕೆನ್ನುವುದನ್ನು ಸೂಚಿಸುತ್ತದೆ.

ಪ್ರಸ್ತುತ ವಿಶ್ವವಿದ್ಯಾಲಯದಲ್ಲಿನ ೫೧ ಸ್ನಾತಕೋತ್ತರ ವಿಭಾಗಗಳಲ್ಲಿ ೧೫೪ ಶಿಕ್ಷಕರು ಸೇವೆಯಲ್ಲಿದ್ದು, ಸ್ನಾತಕೋತ್ತರ, ಎಂ.ಫಿಲ್., ಪಿಎಚ್.ಡಿ, ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ ಸೇರಿ ಸುಮಾರು ೪೫೦೦ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಒಟ್ಟಾರೆ ಸಂಖ್ಯೆಯಲ್ಲಿ ೪೭% ಪ್ರತಿಶತ ವಿದ್ಯಾರ್ಥಿನಿಯರಿದ್ದು, ೬% ಪ್ರತಿಶತ ಹೊರರಾಜ್ಯದ ವಿದ್ಯಾರ್ಥಿಗಳಿದ್ದಾರೆ. ಸಾಮಾಜಿಕ ಹೊರಗಿಡುವಿಕೆಯನ್ನು ತೊಡೆದುಹಾಕಲು ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು, ರಾಜ್ಯ ಸರ್ಕಾರದ ನೀತಿಗೆ ಅನುಗುಣವಾಗಿ ಎಸ್‌ಸಿ/ಎಸ್‌ಟಿ, ಪ್ರವರ್ಗ-೧, ಅಲ್ಪಸಂಖ್ಯಾತರು, ಮತ್ತು ಓಬಿಸಿ ವರ್ಗಗಳಿಗೆ ಸೀಟುಗಳನ್ನು ಕಾಯ್ದಿರಿಸಲಾಗಿದೆ. ಮಾಜಿ ಸೈನಿಕರು, ಸ್ವಾತಂತ್ರö್ಯ ಹೋರಾಟಗಾರರು, ವಿಶೇಷ ಚೇತನರು ಮತ್ತು ಕ್ರೀಡಾಪಟುಗಳ ಮಕ್ಕಳಿಗೆ ತಲಾ ಒಂದು ಸೀಟು ಕಾಯ್ದಿರಿಸಲಾಗಿದೆ. ೧೯೬೪ ರಿಂದ ವಿಶ್ವವಿದ್ಯಾನಿಲಯವು ತನ್ನದೇ ಆದ ಪ್ರೌಢಶಾಲೆ (ಯುನಿವರ್ಸಿಟಿ ಪಬ್ಲಿಕ್ ಸ್ಕೂಲ)ಯನ್ನು ಹೊಂದಿದ್ದು, ಇದು ಕರ್ನಾಟಕ ವಿಶ್ವವಿದ್ಯಾನಿಲಯದ ಬಿ.ಎಡ್. ಕಾಲೇಜಿನ ಅಭ್ಯಾಸದ ಅವಶ್ಯಕತೆಗಳನ್ನು ಪೂರೈಸುತ್ತದೆ.

ವಿಶ್ವವಿದ್ಯಾಲಯದಲ್ಲಿ ವಿಜ್ಞಾನ, ಕಲೆ, ವಾಣಿಜ್ಯ, ಸಂಗೀತ ಮತ್ತು ಲಲಿತಕಲೆಗಳು, ಕಾನೂನು ಮತ್ತು ಶಿಕ್ಷಣದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸುಗಳನ್ನು ನೀಡುತ್ತಿರುವ ೫ ಸಂಲಗ್ನ ಕಾಲೇಜುಗಳಿವೆ. ವೃತ್ತಿ ನಿರತ ಮಹಿಳಾ ವಸತಿನಿಲಯ ಮತ್ತು ಮಹಿಳಾ ವಸತಿನಿಲಯಗಳು ಸೇರಿದಂತೆ ಒಟ್ಟು ೨೧ ವಸತಿನಿಲಯಗಳಿವೆ. ಇವು ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸುಗಳ ಸುಮಾರು ೨೬೦೦ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯವನ್ನು ಒದಗಿಸುತ್ತವೆ. ಕಳೆದ ೭೦ ವರ್ಷಗಳಲ್ಲಿ ಸಂಯೋಜಿತ ಕಾಲೇಜುಗಳ ಸಂಖ್ಯೆ ಕೇವಲ ೩೪ ಇದ್ದದ್ದು ೨೫೦ ಕ್ಕಿಂತ ಹೆಚ್ಚಾಗಿದೆ..

ವಿಶ್ವವಿದ್ಯಾನಿಲಯವು ಗದಗ ಮತ್ತು ಕಾರವಾರ ಜಿಲ್ಲಾ ಕೇಂದ್ರಗಳಲ್ಲಿ ಅನುಕ್ರಮವಾಗಿ ೩೨ ಮತ್ತು ೦೬ ಎಕರೆ ಭೂವಿಸ್ತೀರ್ಣಗಳುಳ್ಳ 02 ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದೆ. ಎಲ್ಲಾ ಕ್ಯಾಂಪಸ್‌ಗಳು ಸ್ವಾವಲಂಬಿಯಾಗಿದ್ದು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ. ಅವು ಸ್ಥಳೀಯ ಜನರ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ವಿಶೇಷ ಅಧ್ಯಯನಗಳನ್ನು ಉತ್ತೇಜಿಸುತ್ತವೆ. ಉದಾಹರಣೆಗೆ, ಪಲ್ಪ ಮತ್ತು ಪೇಪರ ತಂತ್ರಜ್ಞಾನದ ಕೋರ್ಸನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವೆಸ್ಟ ಕೋಸ್ಟ ಪೇಪರ ಮಿಲ್ ಆವರಣದಿಂದ ನಡೆಸಲಾಗುತ್ತದೆ. ವಿಶ್ವವಿದ್ಯಾನಿಲಯವು ೫೦ ಸ್ನಾತಕೋತ್ತರ ಕೋರ್ಸುಗಳು, ೦೪ ಅಡ್ವಾನ್ಸ ಡಿಪ್ಲೋಮಾಗಳು, ೨೮ ಡಿಪ್ಲೋಮಾಗಳು, ೧೧ ಸರ್ಟಿಫಿಕೇಟ ಕೋರ್ಸಗಳು ಮತ್ತು ೪೨ ಪಿಎಚ್.ಡಿ. ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ವ್ಯಾಪಕ ಆಯ್ಕೆಗಳನ್ನು ಒದಗಿಸುತ್ತದೆ. ಹೆಚ್ಚಿನ ವಿಭಾಗಗಳು ಉದಯೋನ್ಮುಖ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವಲ್ಲಿ ಅಂತರಶಿಸ್ತೀಯ ಘಟಕಗಳನ್ನು ಅಳವಡಿಸಿಕೊಳ್ಳುತ್ತಿವೆ.

ಕಳೆದ ಐದು ವರ್ಷಗಳಲ್ಲಿ ವಿಶ್ವವಿದ್ಯಾಲಯವು ಹೊಸ ಹೊಸ ತಾಂತ್ರಿಕ ಕೋರ್ಸುಗಳನ್ನು ಪರಿಚಯಿಸುವುದರ ಮೂಲಕ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸುಗಳ ಅಲಭ್ಯತೆಯಿಂದ ವಿಶ್ವವಿದ್ಯಾಲಯಕ್ಕೆ ಆಗುವ ಸಂಪನ್ಮೂಲ ಕೊರತೆಯನ್ನು ಸರಿದೂಗಿಸಲು ಪ್ರಯತ್ನಿಸುತ್ತಿದೆ. ಪ್ರಸ್ತುತ ವಿಶ್ವವಿದ್ಯಾಲಯದಲ್ಲಿ ಹಲವು ಸ್ವಯಂ ಹಣಕಾಸು ಹಾಗೂ ಸಂಯೋಜಿತ ಕೋರ್ಸುಗಳಿವೆ. ಪ್ರವಾಸೋದ್ಯಮ ಆಡಳಿತದಲ್ಲಿ ಸಂಯೋಜಿತ ಸ್ನಾತಕೋತ್ತರ ಕೋರ್ಸು, ಇ-ಕಾಮರ್ಸ, ಎಂ.ಕಾಂ. (ಕಾರ್ಪೊರೇಟ್ ಸೆಕ್ರೆಟರಿಶಿಪ್), ಎಂ.ಎಸ್ಸಿ (ಅನ್ವಯಿಕ ತಳಿಶಾಸ್ತ್ರ), ಎಂ.ಎಸ್ಸಿ (ಜೈವಿಕ ತಂತ್ರಜ್ಞಾನ), ಎಂ.ಎಸ್ಸಿ (ಕಂಪ್ಯೂಟರ್ ಸೈನ್ಸ), ಎಂ.ಎಸ್ಸಿ (ಸೂಕ್ಮ್ಮ ಜೀವಶಾಸ್ತ್ರ), ಎಂ.ಬಿ.ಎ (ಸಿಬಿಸಿಎಸ್), ಎಂಬಿಎ (ಸಂಜೆ ಕಾರ್ಯಕ್ರಮ), ಎಂಬಿಎ (ಅಂತರರಾ‌ಷ್ಟ್ರಿÃಯ ವ್ಯವಹಾರ), ಎಂಸಿಎ, ಬ್ಯಾಂಕ ಮ್ಯಾನೇಜಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ, ರಿಸ್ಕ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಹಾಗೂ ಅನಿಮೇಷನ್ ಮತ್ತು ಗ್ರಾಫಿಕ್ಸನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸುಗಳನ್ನು ನಡೆಸಲಾಗುತ್ತಿದೆ.

ವಿಶ್ವವಿದ್ಯಾಲಯವು ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳ ಪ್ರಾದೇಶಿಕ ಅಗತ್ಯತೆಗಳು ಮತ್ತು ಒಟ್ಟಾರೆ ಅಭಿವೃದ್ಧಿಯನ್ನು ಗುರುತಿಸುತ್ತದೆ. ಈ ಭಾಗದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸಂವಹನ ಕೌಶಲ್ಯ ಮತ್ತು ಅವರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಕೊರತೆಯಿಂದ ಬಳಲುತ್ತಿದ್ದಾರೆ. ವಿಶ್ವವಿದ್ಯಾಲಯವು ಪ್ರದೇಶ ನಿರ್ದಿಷ್ಟ ಮತ್ತು ಸಮುದಾಯ ನಿರ್ದಿಷ್ಟ ಅಗತ್ಯತೆಗಳನ್ನು ಪರಿಗಣಿಸಲು ಸ್ನಾತಕ ಶಿಕ್ಷಣದಲ್ಲಿ ಕಂಪ್ಯೂಟರ್ ಅಪ್ಲಿಕೇಶನ್‌ಗಳು, ಪರಿಸರ ಸಮಸ್ಯೆಗಳು ಮತ್ತು ಮಾನವ ಹಕ್ಕುಗಳು, ಭಾರತೀಯ ಸಂವಿಧಾನ, ಸಂವಹನ ಕೌಶಲ್ಯ ಮತ್ತು ವ್ಯಕ್ತಿತ್ವ ಬೆಳವಣಿಗೆ ವಿಷಯಗಳನ್ನು ಕಡ್ಡಾಯ ಪತ್ರಿಕೆಗಳಾಗಿ ಪರಿಚಯಿಸಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ (ಬೋಧಕ ಮತ್ತು ಬೋಧಕೇತರ) ಎಲೆಕ್ಟಾçನಿಕ್ ಮಾಹಿತಿಯನ್ನು ಪ್ರವೇಶಿಸುವ ಮತ್ತು ಬಳಸಿಕೊಳ್ಳುವ ಕೌಶಲ್ಯವನ್ನು ಸಜ್ಜುಗೊಳಿಸಲು ನಿಯಮಿತ ಐಸಿಟಿ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಕೇಂದ್ರ ಗ್ರಂಥಾಲಯವು ಎಲ್ಲಾ ವಿಷಯಗಳ ಸಾವಿರಾರು ಪುಸ್ತಕಗಳು, ನಿಯತಕಾಲಿಕೆಗಳು ಮತ್ತು ಶೈಕ್ಷಣಿಕ ಸಿಡರ‍್ಯಾಮ್‌ಗಳನ್ನು ಹೊಂದಿದೆ. ವಿಶ್ವವಿದ್ಯಾನಿಲಯವು ಯುಜಿಸಿ-ಇನ್ಫೋನೆಟ್‌ನ ಭಾಗವಾಗಿದ್ದು, ಇದು ಮುಂದುವರಿದ ಅಧ್ಯಯನ ಮತ್ತು ಸಂಶೋಧನೆಗಾಗಿ ೫೦೦೦ ಕ್ಕೂ ಹೆಚ್ಚು ಎಲೆಕ್ಟ್ರಾನಿಕ್‌ ನಿಯತಕಾಲಿಕೆಗಳಿಗೆ ಪ್ರವೇಶವನ್ನು ನೀಡುತ್ತದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಧಾಮದಲ್ಲಿ ಪೂರ್ಣ ಪ್ರಮಾಣದ ಕಂಪ್ಯೂಟರ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಎಲ್ಲಾ ತರಗತಿ ಕೊಠಡಿಗಳು, ಆಡಿಯೋ-ದೃಶ್ಯಗಳು, ಸ್ಲೈಡ್‌ಗಳು ಮತ್ತು ಎಲ್‌ಸಿಡಿ ಪ್ರೊಜೆಕ್ಟರ್‌ಗಳು ಸೇರಿದಂತೆ ಆಧುನಿಕ ಬೋಧನೆ ಮತ್ತು ಕಲಿಕಾ ಸಾಧನಗಳೊಂದಿಗೆ ಸಜ್ಜುಗೊಂಡಿವೆ.

ವಿಶ್ವವಿದ್ಯಾಲಯದ ವಿದೇಶಿ ಭಾಷೆಗಳ ವಿಭಾಗವು ರಷ್ಯನ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಕೋರ್ಸುಗಳನ್ನು ನೀಡುತ್ತದೆ. ವಿದೇಶಿ ವಿದ್ಯಾರ್ಥಿಗಳ ಅಗತ್ಯತೆಗಳು ಮತ್ತು ಸಮಸ್ಯೆಗಳನ್ನು ಪೂರೈಸಲು ಅಂತರರಾಷ್ಟ್ರಿÃಯ ವಿದ್ಯಾರ್ಥಿ ಸಲಹೆಗಾರರನ್ನು ನಾಮನಿರ್ದೇಶನ ಮಾಡಲಾಗಿದೆ. ಪಾವಟೆ ನಗರದಲ್ಲಿನ ಮುಖ್ಯ ಆವರಣವು ೭೫೦ ಎಕರೆ ಭೂವಿಸ್ತಿರ್ಣವನ್ನು ಹೊಂದಿದ್ದು, ೫೧ ವಿಭಾಗಗಳು, ಕೇಂದ್ರ ಗ್ರಂಥಾಲಯ, ಸಭಾಂಗಣ, ಕ್ರೀಡಾಂಗಣ, ಜಿಮ್ನಾಷಿಯಂ ಹೊಂದಿರುವ ಬ್ಯಾಡ್ಮಿಂಟನ್ ಹಾಲ್, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಬ್ಯೂರೋ, ವಿದ್ಯಾರ್ಥಿ ವಸತಿನಿಲಯಗಳು, ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರ (ಎಂ.ಎಂ.ಟಿ.ಟಿ.ಸಿ), ಆರೋಗ್ಯ ಕೇಂದ್ರ, ಪ್ರಸಾರಾಂಗ, ಎಸ್.ಸಿ/ಎಸ್‌ಟಿ/ಪ್ರವರ್ಗ-೧/ಬಿಸಿಎಂ ಕೋಶಗಳು, ೨ ಅತಿಥಿ ಗೃಹಗಳು, ೨ ಬ್ಯಾಂಕುಗಳು, ಒಂದು ಅಂಚೆ ಕಚೇರಿ, ಒಂದು ಕ್ಯಾಂಟೀನ್, ಮುದ್ರಣಾಲಯ, ಕನ್ನಡ ಸಂಶೋಧನಾ ಸಂಸ್ಥೆಯಲ್ಲಿನ ವಸ್ತು ಸಂಗ್ರಹಾಲಯಗಳು, ಪ್ರಾಣಿಗಳು ಮತ್ತು ಸಸ್ಯಗಳ ವಸ್ತು ಸಂಗ್ರಹಾಲಯ ಮತ್ತು ಪ್ರಾಥಮಿಕ ಶಾಲೆ ಇತ್ಯಾದಿಗಳು ಆವರಣದಲ್ಲಿವೆ. ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು ಕ್ಯಾಂಪಸ್ ಸೌಲಭ್ಯಗಳ ಅಭಿವೃದ್ಧಿಗಾಗಿ ವಿಶ್ವವಿದ್ಯಾಲಯವು ೫೦ ಕೋಟಿ ರೂ.ಗಳ ಆರ್ಥಿಕ ನೆರವಿನೊಂದಿಗೆ ‘ಉತ್ಕೃಷ್ಟ ಸಾಮರ್ಥ್ಯ ಹೊಂದಿರುವ ವಿಶ್ವವಿದ್ಯಾಲಯ’ (ಯುಪಿಇ) ಮನ್ನಣೆಯನ್ನು ಪಡೆದಿದೆ. ಒಟ್ಟಾರೆಯಾಗಿ, ವಿಶ್ವವಿದ್ಯಾನಿಲಯವು ಮುಂದುವರಿದ ಕಲಿಕೆ ಮತ್ತು ವಿದ್ಯಾರ್ಥಿಗಳ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆೆ.

ಅಧಿಸೂಚನೆಗಳು/ಸುತ್ತೋಲೆ


View More

2022. Karnatak University Dharwad. All Rights Reserved | Designed & Developed By : SmarTec IT Solutions